ಈ ದ್ವೀಪದಲ್ಲಿ ಈವರೆಗೆ ಒಬ್ಬರಿಗೂ ಬಂದಿಲ್ಲ ಕೊರೋನಾ..!

masthmagaa.com:

ಲಕ್ಷದ್ವೀಪ: ಭಾರತದಲ್ಲಿ ಕೊರೋನಾ ವೈರಸ್ ಕೋಟಿ ದಾಟಿ ಮುನ್ನುಗ್ಗುತ್ತಿದೆ. ದೇಶದ ನಗರಗಳಿಂದ ಹಿಡಿದು ಹಳ್ಳಿಯವರೆಗೂ ಕೊರೋನಾ ಎಫೆಕ್ಟ್​ ತಟ್ಟಿದೆ. ಆದ್ರೆ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಈವರೆಗೆ ಒಂದೇ ಒಂದು ಕೊರೋನಾ ಪ್ರಕರಣ ದಾಖಲಾಗಿಲ್ಲ.

ಆಶ್ಚರ್ಯ ಆಗ್ಬೋದು.. ಲಕ್ಷದ್ವೀಪದಲ್ಲಿ ಯಾವುದೇ ನಿರ್ಬಂಧಗಳಿಲ್ಲ.. ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅನ್ನೋ ನಿಯಮಗಳಿಲ್ಲ.. ಅದೇ ರೀತಿ ಇಲ್ಲಿ ಮದುವೆ ಸಮಾರಂಭಗಳು ಎಂದಿನಂತೆ ನಡೆಯುತ್ತಿದ್ದು, ಸಾವಿನ ಮನೆಯಲ್ಲೂ ಜನಸಂದಣಿಯ ಮೇಲೆ ನಿರ್ಬಂಧ ವಿಧಿಸಿಲ್ಲ.. ಇನ್ನೂ ಒಂದು ವಿಚಾರ ಅಂದ್ರೆ ಲಕ್ಷ ದ್ವೀಪದಲ್ಲಿ ಶಾಲಾ-ಕಾಲೇಜುಗಳು ಕೂಡ ಎಂದಿನಂತೆ ನಡೆಯುತ್ತಿವೆ.

ಸರ್ಕಾರಿ ಮೂಲಗಳ ಪ್ರಕಾರ ಲಕ್ಷದ್ವೀಪದಲ್ಲಿ ಸಮಯಕ್ಕೆ ಸರಿಯಾಗಿ ಕ್ವಾರಂಟೈನ್ ಮತ್ತು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದರಿಂದ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಸರ್ಕಾರ ದ್ವೀಪದ ಜನರಿಗೆ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದ್ದರು. ಅನಿವಾರ್ಯ ಸ್ಥಿತಿಯಲ್ಲಿ ಮಾತ್ರ ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ತೆರಳಲು ಮತ್ತು ಕೊಚ್ಚಿಗೆ ತೆರಳಲು ಅವಕಾಶ ನೀಡಲಾಗಿತ್ತು. ಈಗಲೂ ಅಷ್ಟೆ.. ಯಾರಾದ್ರೂ ಈ ಕೇಂದ್ರಾಡಳಿತ ಪ್ರದೇಶದಿಂದ ಹೊರಹೋದ್ರೆ ವಾಪಸ್ ಹೋಗುವ ಮುನ್ನ ಕೊಚ್ಚಿಯಲ್ಲಿ 10 ದಿನ ಕ್ವಾರಂಟೈನ್​​ಗೆ ಒಳಪಡಬೇಕು.. 7ನೇ ದಿನ ಟೆಸ್ಟ್ ನಡೆಸಲಾಗುತ್ತೆ. ವರದಿಯಲ್ಲಿ ನೆಗೆಟಿವ್ ಅಂತ ಬಂದರೆ ಮಾತ್ರವೇ ಲಕ್ಷದ್ವೀಪಕ್ಕೆ ಹೋಗಲು ಅನುಮತಿ ಸಿಗುತ್ತೆ. ಅಲ್ಲಿಗೆ ಹೋದ ಬಳಿಕವೂ 5 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಪಡಬೇಕಾಗುತ್ತೆ. ಅದೇ ಪಾಸಿಟಿವ್ ಬಂದರೆ ಕೊಚ್ಚಿಯಲ್ಲೇ ಚಿಕಿತ್ಸೆ ಪಡೆದು, ಮತ್ತೆ ಕ್ವಾರಂಟೈನ್​​ಗೆ ಒಳಪಟ್ಟು ನೆಗೆಟಿವ್ ರಿಪೋರ್ಟ್​ ಬಂದ ಬಳಿಕವೇ ದ್ವೀಪಕ್ಕೆ ಎಂಟ್ರಿ ಸಿಗುತ್ತೆ.

-masthmagaa.com

Contact Us for Advertisement

Leave a Reply