masthmagaa.com:

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ಬಳಿಕ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಸೇರಿದಂತೆ ಹಲವು ಪಕ್ಷಗಳು ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸಿದ್ದವು. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬರುವ ಡಿಡಿಸಿ (District Development Council) ಚುನಾವಣೆಯಲ್ಲಿ ನಾವು ಸ್ಪರ್ಧಿಸ್ತೀವಿ ಅಂತ ಪೀಪಲ್ಸ್​ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (PAGD) ಘೋಷಿಸಿದೆ. ಈ ಮೈತ್ರಿಕೂಟದ ವಕ್ತಾರ ಸಜದ್ ಲೋನ್ ಮಾತನಾಡಿ, ‘ನಾವು ನಾಗರಿಕ ಸಮಾಜ, ರಾಜಕೀಯ ಪಕ್ಷಗಳು, ಗುರ್ಜರ್ ಸಮುದಾಯ, ಎಸ್​ಸಿ/ಎಸ್​ಟಿ ಸಮುದಾಯ ಮತ್ತು ದಲಿತರನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ್ದಕ್ಕೆ ಬೇಜಾರಾಗಿದ್ದಾರೆ. ಹೀಗಾಗಿ ನಾವು ಒಗ್ಗಟ್ಟಾಗಿ ಡಿಡಿಸಿ ಎಲೆಕ್ಷನ್​ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೀವಿ. ಅಭ್ಯರ್ಥಿಗಳ ಪಟ್ಟಿಯನ್ನು ನಮ್ಮ ಮೈತ್ರಿಕೂಟದ ಮುಖ್ಯಸ್ಥರಾಗಿರುವ ಫಾರೂಕ್ ಅಬ್ದುಲ್ಲಾ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ’ ಅಂತ ಹೇಳಿದ್ದಾರೆ.

ಅಂದ್ಹಾಗೆ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಡಿಡಿಸಿ ಚುನಾವಣೆ ನಡೆಯಲಿದೆ. ನವೆಂಬರ್ 28ರಿಂದ ಆರಂಭವಾಗಲಿರುವ ಚುನಾವಣೆ ಡಿಸೆಂಬರ್ 19ರವರಗೆ ನಡೆಯಲಿದೆ. ಪೀಪಲ್ಸ್​ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (PAGD) ಅಂದ್ರೆ 2019ರ ಆಗಸ್ಟ್ 4ರಂದು, ಅಂದ್ರೆ ವಿಶೇಷ ಸ್ಥಾನಮಾನ ರದ್ದಾದ ಒಂದು ದಿನ ಮುಂಚಿತವಾಗಿ ಜಮ್ಮು-ಕಾಶ್ಮೀರದ ಗುಪ್ಕರ್ ರಸ್ತೆಯಲ್ಲಿರುವ ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ವಿವಿಧ ಪಕ್ಷಗಳ ನಾಯಕರು ಸಭೆ ಸೇರಿದ್ದರು. ಸಭೆಯಲ್ಲಿ ‘ಗುರುತು, ಸ್ವಾಯತ್ತತೆ ಮತ್ತು ವಿಶೇಷ ಸ್ಥಾನಮಾನದ ರಕ್ಷಣೆಗೆ ಹೋರಾಡುವುದಾಗಿ’ ಘೋಷಣೆ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply