masthmagaa.com:

ಮಾರಣಾಂತಿಕ ಕೊರೋನಾ ವೈರಸ್​ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ಜಗತ್ತಿನ ವಿವಿಧ ದೇಶಗಳಲ್ಲಿ ನಡೆಯುತ್ತಿದೆ. ಕೆಲವೊಂದು ಲಸಿಕೆಗಳು ಕೊನೆಯ ಹಂತದ ಮಾನವ ಪ್ರಯೋಗ ನಡೆಸುತ್ತಿವೆ. ಜನ ಸಾಮಾನ್ಯರ ಬಳಕೆಗೆ ಇವು ಯಾವಾಗ ಲಭ್ಯವಾಗುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಒಂದ್ವೇಳೆ ಲಸಿಕೆ ಬಂದರೂ ಜನ ಸಾಮಾನ್ಯರು ಅದನ್ನು ಪಡೆಯಲು ಭಯಪಡುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ಹೊಸ ಲಸಿಕೆ ಎಂಬ ಕಾರಣವಿರಬಹುದು ಅಥವಾ ಅಡ್ಡ ಪರಿಣಾಮ ಏನಾದ್ರೂ ಆಗುತ್ತಾ ಅನ್ನೋ ಭಯ ಇರಬಹುದು.

ಈ ಭಯವನ್ನು ಹೋಗಲಾಡಿಸಿ ಜನರಲ್ಲಿ ಲಸಿಕೆಗಳ ಬಗ್ಗೆ ವಿಶ್ವಾಸ ಮೂಡಿಸಲು ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ & ಪ್ರಿವೆನ್ಷನ್​ನ ಮುಖ್ಯಸ್ಥ ಗಾವೋ ಫು ಎಂಬುವವರು ಸ್ವತಃ ತಾವೇ ಲಸಿಕೆಯನ್ನು ಚುಚ್ಚಿಸಿಕೊಂಡಿರುವುದಾಗಿ ಹೇಳಿದ್ದಾರೆ. ಈ ಮೂಲಕ ಒಂದ್ವೇಳೆ ಯಾವುದಾದರೂ ಲಸಿಕೆಗೆ ಸರ್ಕಾರದಿಂದ ಅನುಮೋದನೆ ಸಿಕ್ಕರೆ ಅದನ್ನು ಜನ ಸಾಮಾನ್ಯರು ಭಯ ಪಡದೆ ಚುಚ್ಚಿಸಿಕೊಳ್ಳಬಹುದು ಎಂಬ ಸಂದೇಶ ರವಾನಿಸಿದ್ದಾರೆ.

ಆದ್ರೆ ಈ ಲಸಿಕೆಯನ್ನು ಯಾವಾಗ ಮತ್ತು ಹೇಗೆ ಪಡೆದರು ಎಂಬುದನ್ನ ಗಾವೋ ಫು ಬಹಿರಂಗಪಡಿಸಿಲ್ಲ. ಯಾಕಂದ್ರೆ ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಯೊಂದು ಮಾರ್ಚ್​ ತಿಂಗಳಲ್ಲಿ ಲಸಿಕೆ ಪರೀಕ್ಷೆಗೆ ಅನುಮೋದನೆ ಪಡೆಯುವ ಮೊದಲೇ ತನ್ನ ನೌಕರರ ಮೇಲೆ ಲಸಿಕೆಯನ್ನು ಪ್ರಯೋಗಿತ್ತು. ಇದಕ್ಕೆ ಸಂಬಂಧಿಸಿದಂತೆ ತಜ್ಞರು ಕಳವಳ ವ್ಯಕ್ತಪಡಿಸಿದ್ದರು. ಇದೇ ವೇಳೆ ಗಾವೋ ಫು ಅವರಿಗೂ ಲಸಿಕೆ ನೀಡಲಾಗಿತ್ತೇ ಅನ್ನೋ ಅನುಮಾನ ಹುಟ್ಟಿದೆ.

ಕೊರೋನಾಗೆ ನಾವೇ ಮೊದಲು ಲಸಿಕೆ ಕಂಡು ಹಿಡಿಯಬೇಕು ಅಂತ ಬ್ರಿಟನ್, ಅಮೆರಿಕ ಮತ್ತು ಚೀನಾ ದೇಶಗಳು ಪೈಪೋಟಿ ನಡೆಸುತ್ತಿರುವಾಗಲೇ ಚೀನಾದ ಅಧಿಕಾರಿಯೊಬ್ಬರು ಈ ರೀತಿ ಹೇಳಿಕೆ ಕೊಟ್ಟಿರೋದು ಸಾಕಷ್ಟು ಮಹತ್ವ ಪಡೆದಿದೆ. ಜಗತ್ತಿನಾದ್ಯಂತ ಮನುಷ್ಯನ ಮೇಲೆ ಪ್ರಯೋಗಿಸಲಾಗುತ್ತಿರುವ ಸುಮಾರು 20ಕ್ಕೂ ಹೆಚ್ಚು ಲಸಿಕೆಗಳಲ್ಲಿ 8 ಲಸಿಕೆಗಳು ಚೀನಾದ್ದೇ ಅನ್ನೋದು ಗಮನಾರ್ಹ. ಇದು ಬೇರೆ ದೇಶಗಳಿಗಿಂತ ಹೆಚ್ಚು.

-masthmagaa.com

Contact Us for Advertisement

Leave a Reply