masthmagaa.com:

ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳನ್ನ ಸೋತು ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 302 ರನ್ ಕಲೆ ಹಾಕ್ತು. ಭಾರತದ ಪರ ಹಾರ್ದಿಕ್ ಪಾಂಡ್ಯ 92, ರವೀಂದ್ರ ಜಡೇಜ 66 ಮತ್ತು ನಾಯಕ ವಿರಾಟ್ ಕೊಹ್ಲಿ 63 ರನ್ ಸಿಡಿಸಿ ಮಿಂಚಿದ್ರು. ಇದರ ಜೊತೆಗೆ ಏಕದಿನ ಕ್ರಿಕೆಟ್​ನಲ್ಲಿ 12,000 ರನ್ ಪೂರೈಸಿದ ದಾಖಲೆಯನ್ನೂ ಮಾಡಿದ್ರು ಕೊಹ್ಲಿ. ಈ ಮೂಲಕ ವೇಗವಾಗಿ 12,000 ರನ್ ಪೂರೈಸಿದ ಆಟಗಾರ ಎನಿಸಿಕೊಂಡ್ರು. ಸಚಿನ್ ಈ ದಾಖಲೆಯನ್ನ 300 ಇನ್ನಿಂಗ್ಸ್​ನಲ್ಲಿ ಮಾಡಿದ್ರೆ, ಕೊಹ್ಲಿ ಕೇವಲ 242 ಇನ್ನಿಂಗ್ಸ್​ನಲ್ಲಿ ಈ ದಾಖಲೆ ಮಾಡಿದ್ರು.

ಮೊದಲೆರಡು ಪಂದ್ಯಗಳಲ್ಲಿ ಭಾರತಕ್ಕೆ 370ಕ್ಕೂ ಅಧಿಕ ರನ್​ಗಳ ಟಾರ್ಗೆಟ್​ ನೀಡಿದ್ದ ಆಸ್ಟ್ರೇಲಿಯಾ ಇವತ್ತಿನ ಪಂದ್ಯದಲ್ಲಿ 303 ರನ್ ಟಾರ್ಗೆಟ್ ಬೆನ್ನತ್ತಲು ವಿಫಲವಾಯ್ತು. 289 ರನ್​ಗೆ ಆಲೌಟ್​ ಆದ ಆಸ್ಟ್ರೇಲಿಯಾ 13 ರನ್​ಗಳಿಂದ ಸೋಲು ಕಾಣ್ತು. ಆಸ್ಟ್ರೇಲಿಯಾ ಪರ ಫಿಂಚ್ 75 ಮತ್ತು ಮ್ಯಾಕ್ಸ್​ವೆಲ್ 59 ರನ್ ಸಿಡಿಸಿದ್ರೆ, ಭಾರತದ ಪರ ಶಾರ್ದೂಲ್ ಠಾಕೂರ್ 3 ವಿಕೆಟ್, ಬೂಮ್ರಾ ಮತ್ತು ನಟರಾಜನ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು. 3 ಪಂದ್ಯಗಳ ಏಕದಿನ ಸರಣಿಯನ್ನ ಆಸ್ಟ್ರೇಲಿಯಾ ತಂಡ 2-1 ಅಂತರದಿಂದ ಗೆದ್ದಂತಾಗಿದೆ. ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರೆ, ಸ್ಟೀವ್ ಸ್ಮಿತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ್ರು. ಡಿಸೆಂಬರ್ 4ನೇ ತಾರೀಖು ಮೊದಲ ಟಿ-20 ಪಂದ್ಯ ನಡೆಯಲಿದೆ. ಇದು ಒಟ್ಟು 3 ಪಂದ್ಯಗಳ ಸರಣಿಯಾಗಿದೆ.

-masthmagaa.com

Contact Us for Advertisement

Leave a Reply