masthmagaa.com:

ಭಾರತದಲ್ಲಿ ಕೊರೋನಾ ಸೋಂಕಿನ ಹಾವಳಿ ಮತ್ತಷ್ಟು ಕಮ್ಮಿಯಾಗುವ ಲಕ್ಷಣ ಕಾಣುತ್ತಿದೆ. ಯಾಕಂದ್ರೆ ಕಳೆದ 24 ಗಂಟೆಗಳ ಅವಧಿಯಲ್ಲಿ 46,791 ಜನರಿಗೆ ಸೋಂಕು ದೃಢಪಟ್ಟಿದೆ. ಜುಲೈ 23ರ ಬಳಿಕ ದೃಢಪಟ್ಟ ಅತಿ ಕಡಿಮೆ ಪ್ರಕರಣ ಇದಾಗಿದೆ. ಜುಲೈ 23ರಂದು 45,720 ಜನರಿಗೆ ಸೋಂಕು ತಗುಲಿತ್ತು. ಇದೀಗ 46,791.. ಹಾಗಂತ ಕೊರೋನಾ ಪರೀಕ್ಷೆಗಳನ್ನು ಕಡಿಮೆ ಮಾಡುತ್ತಿದ್ದಾರಾ ಅಂದ್ರೆ ಇಲ್ಲ.. ಪ್ರತಿದಿನ 8ರಿಂದ 12 ಲಕ್ಷದಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ದೇಶದಲ್ಲಿ ಕೊರೋನಾ ವೈರಸ್ ಸೆಪ್ಟೆಂಬರ್​ನಲ್ಲೇ​ ಗರಿಷ್ಠ ಮಟ್ಟ (ಪೀಕ್) ತಲುಪಿತ್ತು ಅಂತ ಕೇಂದ್ರ ಆರೋಗ್ಯ ಇಲಾಖೆ ಇತ್ತೀಚೆಗೆ ಹೇಳಿದ ಬೆನ್ನಲ್ಲೇ ಪ್ರತಿದಿನ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ. ಮಹಾಮಾರಿಯ ಹಾವಳಿ ಇದೇರೀತಿ ಕಮ್ಮಿಯಾಗಲಿ ಅನ್ನೋದು ಎಲ್ಲರ ಆಶಯ. ಆದ್ರೆ ಕೊರೋನಾ ವಿಚಾರದಲ್ಲಿ ಯಾವುದನ್ನೂ ಹೇಳೋಕ್ಕಾಗಲ್ಲ ಅನ್ನೋದನ್ನ ಮರೆಯಬಾರದು. ಯಾಕಂದ್ರೆ ಕೊರೋನಾ ಕುರಿತು ಈ ಹಿಂದೆ ಮಾಡಿದ ಸಾಕಷ್ಟು ಊಹೆಗಳು ಉಲ್ಟಾ ಆಗಿವೆ. ಈ ವೈರಾಣು ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತೆ ಅಂತ ಹೇಳೋಕ್ಕಾಗಲ್ಲ.

ಸದ್ಯ ದೇಶದಲ್ಲಿ ಒಟ್ಟು ದೃಢಪಟ್ಟ ಕೊರೋನಾ ಪ್ರಕರಣಗಳ ಸಂಖ್ಯೆ 75.97 ಲಕ್ಷ ದಾಟಿದೆ. ಕಳೆದ 24 ಗಂಟೆಗಳಲ್ಲಿ 587 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 1.15 ಲಕ್ಷ ದಾಟಿದೆ. ಹೊಸದಾಗಿ 69,000+ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 67.33 ಲಕ್ಷ ದಾಟಿದೆ. ದೇಶದಲ್ಲಿ ಇನ್ನೂ ಕೂಡ 7.48 ಲಕ್ಷ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಕ್ರಿಯ ಪ್ರಕರಣಗಳ ಸಂಖ್ಯೆ 2021ರ ಫೆಬ್ರವರಿಯಲ್ಲಿ 40,000ಕ್ಕೆ ಇಳಿಯಲಿದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಗುಣಮುಖ ಪ್ರಮಾಣ 88.63% ಇದ್ದು, ಸಾವಿನ ಪ್ರಮಾಣ 1.52% ಇದೆ. ಅಕ್ಟೋಬರ್ 19ರಂದು ದೇಶದಲ್ಲಿ 10.32 ಲಕ್ಷ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರೊಂದಿಗೆ ಇದುವರೆಗೆ ನಡೆಸಿದ ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 9.61 ಕೋಟಿ ದಾಟಿದೆ.

ಕೇವಲ ದೇಶದಲ್ಲಿ ಮಾತ್ರವಲ್ಲ ನಮ್ಮ ಕರ್ನಾಟಕದಲ್ಲೂ ಕೊರೋನಾ ಹಾವಳಿ ಕಮ್ಮಿಯಾದಂತೆ ಕಾಣ್ತಿದೆ. ಯಾಕಂದ್ರೆ ನಿನ್ನೆ 5,018 ಜನರಿಗೆ ಸೋಂಕು ದೃಢಪಟ್ಟಿದೆ.

-masthmagaa.com

Contact Us for Advertisement

Leave a Reply