masthmagaa.com:

ಭಾರಿ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್ ಅವರನ್ನ ಸೋಲಿಸಿ ಡೆಮಾಕ್ರೆಟಿಕ್ ಪಕ್ಷದ ಜೋಸೆಫ್ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿದ್ದಾರೆ. ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದ್ದ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ರಾತ್ರಿ ಬೈಡೆನ್ ಗೆಲುವು ದಾಖಲಿಸುತ್ತಿದ್ದಂತೇ ಅಮೆರಿಕದ ಮುಂದಿನ ಅಧ್ಯಕ್ಷ ಅವರೇ ಅನ್ನೋದು ಕನ್ಫರ್ಮ್ ಆಯ್ತು. ಆದ್ರೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಒಟ್ಟು 538 ಎಲೆಕ್ಟೊರಲ್ ವೋಟ್​ಗಳ ಪೈಕಿ ಬೈಡೆನ್ 279 ಮತಗಳನ್ನ ಗೆದ್ದು ಮುನ್ನಡೆ ಸಾಧಿಸಿದ್ದರೆ, ಟ್ರಂಪ್ 214ರಲ್ಲೇ ಇದ್ದಾರೆ. ಅಮೆರಿಕ ಚುನಾವಣೆ ಗೆಲ್ಲಲು ಮ್ಯಾಜಿಕ್ ನಂಬರ್ 270 ದಾಟಬೇಕು. ಜೋಸೆಫ್ ಬೈಡೆನ್ ಅದಕ್ಕಿಂತ ಹೆಚ್ಚಿನ ಎಲೆಕ್ಟೊರಲ್ ಮತಗಳನ್ನ ಪಡೆದು ಅಮೆರಿಕದ ಅಧಿಪತಿಯಾಗಿದ್ದಾರೆ. 4 ರಾಜ್ಯಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿಲ್ಲ. ಈ ಪೈಕಿ ಅರಿಝೋನಾ ಮತ್ತು ಜಾರ್ಜಿಯಾದಲ್ಲಿ ಬೈಡೆನ್ ಮುನ್ನಡೆ ಸಾಧಿಸಿದ್ದರೆ.. ನಾರ್ಥ್​ ಕೆರೊಲಿನಾ ಮತ್ತು ಅಲಸ್ಕಾದಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ.

ಇನ್ನು ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಲವು ದಾಖಲೆಗಳನ್ನ ಬರೆದಿದೆ. ಮೊದಲನೇದಾಗಿ ಈ ಬಾರಿ ಅಮೆರಿಕದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮತದಾನವಾಗಿದೆ. ಎರಡನೇದಾಗಿ 77 ವರ್ಷದ ಬೈಡೆನ್ ಅಮೆರಿಕದ ಅತಿ ಹಿರಿಯ ಅಧ್ಯಕ್ಷರಾಗಲಿದ್ದಾರೆ. ಈ ಹಿಂದೆ ಡೊನಾಲ್ಡ್​ ಟ್ರಂಪ್ ಅತಿ ಹಿರಿಯ ಅಧ್ಯಕ್ಷ ಎನಿಸಿಕೊಂಡಿದ್ದರು. ಇದೀಗ ಅವರಿಗಿಂತಲೂ 3 ವರ್ಷ ದೊಡ್ಡವರಾದ ಬೈಡೆನ್ ಅಧ್ಯಕ್ಷರಾಗಿದ್ದಾರೆ. ಮೂರನೇದಾಗಿ ಅಮೆರಿಕ ಕಾಣುತ್ತಿರುವ ಮೊದಲ ಮಹಿಳಾ ಉಪಾಧ್ಯಕ್ಷೆ ಅನ್ನೋ ಕೀರ್ತಿಗೆ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ನಾಲ್ಕನೇದಾಗಿ ಕಪ್ಪು ವರ್ಣಿಯರೊಬ್ಬರು ಅಮೆರಿಕದ ಉಪಾಧ್ಯಕ್ಷರಾಗುತ್ತಿರೋದು ಇದೇ ಮೊದಲು. ಐದನೇದಾಗಿ ಏಷ್ಯಾ ಮೂಲದವರು ಅಮೆರಿಕದ ಉಪಾಧ್ಯಕ್ಷರಾಗುತ್ತಿರೋದು ಕೂಡ ಇದೇ ಮೊದಲು. ಅಂದ್ಹಾಗೆ ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಲಸೆಂದ್ರಪುರಂನವರು. ಅವರು ತಮ್ಮ 19ನೇ ವಯಸ್ಸಿಗೆ ಅಮೆರಿಕಗೆ ಹೋಗಿ ನೆಲೆಸಿದ್ರು. ಕಮಲಾ ಹ್ಯಾರಿಸ್ ಅವರ ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾದವರು.

ಇದೆಲ್ಲದರ ನಡುವೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಸೋಲು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಅಂತ ಆರೋಪಿಸುತ್ತಿರುವ ಟ್ರಂಪ್ ಅದರ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ. ಜೊತೆಗೆ ಮತಎಣಿಕೆ ಪೂರ್ಣಗೊಳ್ಳದೆ, ಫಲಿತಾಂಶ ಅಧಿಕೃತವಾಗ ಘೋಷಣೆಯಾಗದೇ ಬೈಡೆನ್‌ ಅಧ್ಯಕ್ಷ ಅಂತ ಹೇಳೋದು ತಪ್ಪು ಅಂತ ಹೇಳಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ಪೆನ್ಸಿಲ್ವೇನಿಯಾದ ಫಲಿತಾಂಶ ಘೋಷಣೆಯಾಗುವ ಸಂದರ್ಭದಲ್ಲಿ ಟ್ರಂಪ್ ಗಾಲ್ಫ್ ಆಡುತ್ತಿದ್ದರು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply