masthmagaa.com:

ಅಕ್ಟೋಬರ್ 18ರಂದು ಭಾರತ ನಡೆಸಿದ ನೌಕಾಪಡೆ ಆವೃತ್ತಿಯ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್​​ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ವಿಡಿಯೋ ವೈರಲ್ ಆಗಿದೆ. ಐಎನ್​ಎಸ್ ಚೆನ್ನೈನಿಂದ ಇದನ್ನು ಉಡಾಯಿಸಲಾಗಿತ್ತು. ಈ ವೇಳೆ ಪಿನ್ ಪಾಯಿಂಟ್​ ನಿಖರತೆಯೊಂದಿಗೆ ಗುರಿ ತಲುಪಿದೆ ಅಂತ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಯಶಸ್ವಿ ಪರೀಕ್ಷೆಯೊಂದಿಗೆ ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ.

ಈ ಮೂಲಕ ಕಳೆದ ಎರಡು ತಿಂಗಳಲ್ಲಿ ಭಾರತ ಒಟ್ಟು 11 ಕ್ಷಿಪಣಿಗಳನ್ನ ಪರೀಕ್ಷಿಸಿದಂತಾಗಿದೆ. ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆ ಭಾರತ ಒಂದರ ಮೇಲೊಂದರಂತೆ ಕ್ಷಿಪಣಿ ಪರೀಕ್ಷೆ ನಡೆಸುತ್ತಿರೋದು ಗಮನಾರ್ಹ. ಈಗಾಗಲೇ ವಾಸ್ತವ ನಿಯಂತ್ರಣ ರೇಖೆ ಸಮೀಪ ಭಾರತ ಒಂದಷ್ಟು ಪ್ರಮಾಣದ ಬ್ರಹ್ಮೋಸ್ ಕ್ಷಿಪಣಿಗಳನ್ನು ನಿಯೋಜಿಸಿದೆ.

ಅಂದ್ಹಾಗೆ ಭಾರತ ಮತ್ತು ರಷ್ಯಾದ ಬ್ರಹ್ಮೋಸ್ ಏರೋಸ್ಪೇಸ್ ಕಂಪನಿ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ತಯಾರಿಸುತ್ತದೆ. ಈ ಕ್ಷಿಪಣಿಗಳನ್ನು ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂಮಿಯಿಂದ ಉಡಾಯಿಸಬಹುದು. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೋಸ್ಕ್ವಾ ನದಿಗಳ ಹೆಸರನ್ನು ಸೇರಿಸಿ ‘ಬ್ರಹ್ಮೋಸ್’ ಅಂತ ಇದಕ್ಕೆ ಹೆಸರಿಡಲಾಗಿದೆ.

-masthmagaa.com

 

Contact Us for Advertisement

Leave a Reply