ಒಂದು ಇಂಚು ಭೂಮಿಯನ್ನು ಕಿತ್ತುಕೊಳ್ಳಲಾಗುವುದಿಲ್ಲ: ಚೀನಾಗೆ ಸಿಂಗ್ ವಾರ್ನಿಂಗ್

masthmagaa.com:

ಲಡಾಖ್​ ಪೂರ್ವ ಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ಬೆನ್ನಲ್ಲೇ ಇತ್ತೀಚೆಗೆ ಲಡಾಖ್​ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಯೋಧರ ಆತ್ಮಬಲ, ಉತ್ಸಾಹ ಹೆಚ್ಚಿಸಿ ಬಂದಿದ್ರು. ಇದೀಗ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್ ಲಡಾಖ್​ನ ಲೇಹ್​ಗೆ ಭೇಟಿ ನೀಡಿದ್ದಾರೆ. ರಾಜ್​ನಾಥ್ ಸಿಂಗ್​ಗೆ ಸಿಡಿಎಸ್ ಬಿಪಿನ್​ ರಾವತ್ ಮತ್ತು ಭೂಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಸಾಥ್ ನೀಡಿದ್ರು.

ಮೊದಲಿಗೆ ಲೇಹ್​ ಏರ್​ಪೋರ್ಟ್​ಗೆ ಬಂದಿಳಿದ ರಾಜ್​ನಾಥ್ ಸಿಂಗ್ ಅಲ್ಲಿಂದ ಸ್ಟಕ್ನಾಗೆ ತೆರಳಿ ಶಸಸ್ತ್ರ ಪಡೆಯ ಪ್ಯಾರಾ ಡ್ರಾಪಿಂಗ್ ಕೌಶಲ್ಯವನ್ನು ವೀಕ್ಷಿಸಿದರು. ಯೋಧರು ಪ್ಯಾರಾಚೂಟ್​ಗಳ ಮೂಲಕ ಲ್ಯಾಂಡ್ ಆಗೋದನ್ನು ಕಣ್ತುಂಬಿಕೊಂಡ್ರು. ಇದೇ ವೇಳೆ ಭಾರತೀಯ ಸೇನೆಯ ಟಿ-90 ಟ್ಯಾಂಕ್​ ಮತ್ತು ಬಿಎಂಪಿ ಕಾಲಾಳುಪಡೆಯ ಯುದ್ಧ ವಾಹನಗಳು ಅಭ್ಯಾಸ ನಡೆಸಿದವು.

ಇದನ್ನೂ ಓದಿ: ಬೆಂಗಳೂರಲ್ಲಿ ಒಂದು ವಾರ ಮಾತ್ರ ಲಾಕ್​ಡೌನ್.. ವದಂತಿಗೆ ತೆರೆ ಎಳೆದ ಸರ್ಕಾರ

ಬಳಿಕ ಯೋಧರನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್, ‘ಇತ್ತೀಚೆಗೆ ನಡೆದ ಭಾರತ ಮತ್ತು ಚೀನಾ ಸೈನಿಕರ ಘರ್ಷಣೆಯಲ್ಲಿ ನಮ್ಮ ಗಡಿಯನ್ನು ಕಾಯುತ್ತಿದ್ದ 20 ಯೋಧರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ನಮ್ಮ ಯೋಧರ ನಷ್ಟದ ಬಗ್ಗೆ ದುಃಖವಿದೆ. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಬಗೆಹರಿಸಬಹುದು ಅಂತ ನಾನು ಖಾತರಿಪಡಿಸುವುದಿಲ್ಲ. ನಾನು ನಿಮಗೆ ಭರವಸೆ ನೀಡುತ್ತೇನೆ, ನಮ್ಮ ನೆಲದ ಒಂದು ಇಂಚು ಸಹ ಜಗತ್ತಿನ ಯಾವುದೇ ದೇಶ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಮಾತುಕತೆ ಮೂಲಕ ಪರಿಹಾರ ಕಂಡುಹಿಡಿದರೆ ಉತ್ತಮ’ ಎಂದಿದ್ದಾರೆ.

ನಂತರ ಪ್ಯಾಂಗಾಂಗ್ ಲೇಕ್ ಸಮೀಪದ ಲುಕುಂಗ್ ಪೋಸ್ಟ್​ಗೂ ಭೇಟಿ ನೀಡಿದ ರಕ್ಷಣಾ ಸಚಿವರು ಭಾರತೀಯ ಸೇನೆ ಮತ್ತು ಐಟಿಬಿಪಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ಯೋಧರಿಗೆ ಸಿಹಿ ಹಂಚಿದ್ರು. ಅಂದ್ಹಾಗೆ ಪ್ಯಾಂಗಾಂಗ್ ಲೇಕ್​ನ ಉತ್ತರ-ಪಶ್ಚಿಮ ಭಾಗದಲ್ಲಿರೋ ಲುಕುಂಗ್ ಪೋಸ್ಟ್ ಫಿಂಗರ್ ಏರಿಯಾ-4ರಿಂದ 43 ಕಿಲೋ ಮೀಟರ್ ದೂರದಲ್ಲಿದೆ. ಫಿಂಗರ್ ಏರಿಯಾ-4ರಲ್ಲಿ ಭಾರತ ಮತ್ತು ಚೀನಾ ಸೇನೆಗಳು ಸದ್ಯ ಸೇನಾ ಹಿಂಪಡೆಯುವಿಕೆ ಕಾರ್ಯದಲ್ಲಿ ತೊಡಗಿವೆ.

-masthmagaa.com

Contact Us for Advertisement

Leave a Reply