masthmagaa.com:

ಹಿರಿಯ ಪತ್ರಕರ್ತ, ಬರಹಗಾರ, ಹಾಯ್ ಬೆಂಗಳೂರು ಪತ್ರಿಕೆ ಮತ್ತು ಕ್ರೈಂ ಡೈರಿ ಕಾರ್ಯಕ್ರಮ ಖ್ಯಾತಿಯ ರವಿ ಬೆಳಗೆರೆ ನಿಧನರಾಗಿದ್ದಾರೆ. ತಡರಾತ್ರಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಅಂತ ವರದಿಯಾಗಿದೆ. ರವಿ ಬೆಳಗೆರೆಗೆ ಇಬ್ಬರು ಪತ್ನಿಯರು (ಲಲಿತಾ ಮತ್ತು ಯಶೋಮತಿ), ಇಬ್ಬರು ಪುತ್ರಿಯರು (ಚೇತನಾ ಬೆಳಗೆರೆ, ಭಾವನಾ ಬೆಳಗೆರೆ) ಹಾಗೂ ಇಬ್ಬರು ಪುತ್ರರು (ಕರ್ಣ, ಹಿಮವಂತ್) ಇದ್ದಾರೆ. ಸದ್ಯ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

ಅಂದ್ಹಾಗೆ ಮಾರ್ಚ್​ 15, 1958ರಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿ ರವಿ ಬೆಳಗೆರೆ ಜನಿಸಿದ್ರು. ತುಮಕೂರಿನ ಸಿದ್ಧಗಂಗಾ ಹೈಸ್ಕೂಲ್​ನಲ್ಲಿ ಪ್ರೌಢಶಿಕ್ಷಣ ಮುಗಿಸಿದ ಅವರು ಬಳ್ಳಾರಿಯಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಬಳಿಕ ಬಳ್ಳಾರಿ, ಹಾಸನ, ಹುಬ್ಬಳ್ಳಿ ಮುಂತಾದ ಕಡೆ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ರು. ಬಳಿಕ ಪತ್ರಿಕೋದ್ಯಮದ ಕಡೆಗೆ ಹೊರಳಿದ ರವಿ ಬೆಳಗೆರೆ ಬೆಂಗಳೂರಿಗೆ ಬಂದು 1995ರಲ್ಲಿ ತಮ್ಮದೇ ಆದ ‘ಹಾಯ್ ಬೆಂಗಳೂರು’ ಪತ್ರಿಕೆ ಆರಂಭಿಸಿದ್ರು. ಇದರಲ್ಲಿ ಅವರು ಬರೆಯುತ್ತಿದ್ದ ಲವಲವಿಕೆ, ಬಾಟಮ್ ಐಟಂ, ಖಾಸ್ ಬಾತ್, ಪಾಪಿಗಳ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಎಷ್ಟರ ಮಟ್ಟಿಗೆ ಅಂದ್ರೆ ಈ ಪತ್ರಿಕೆ 5 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಮಾರಾಟವಾಯ್ತು. ಈ ಯಶಸ್ಸಿನ ಬಳಿಕ ‘ಓ ಮನಸೆ’ ಮ್ಯಾಗಜೀನ್ ಶುರು ಮಾಡಿದ್ರು. ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಸೇರಿದಂತೆ ಸುಮಾರು 70 ಪುಸ್ತಕಗಳನ್ನ ಬರೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಬಂದಿವೆ. ರವಿ ಬೆಳಗೆರೆ ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದಾರೆ. ಈ ಶಾಲೆಯಲ್ಲಿ 8,000ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ.

ರವಿ ಬೆಳಗೆರೆ ಅವರು ಟಿವಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ ಪುಸ್ತಕಗಳನ್ನ ಓದೋದು, ಬರೆಯೋದು ಮತ್ತು ಪ್ರವಾಸ ಮಾಡೋದು ಅಂದ್ರೆ ತುಂಬಾ ಇಷ್ಟ. ಆದ್ರೆ ತಮ್ಮ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪದಲ್ಲಿ 2017ರಲ್ಲಿ ರವಿ ಬೆಳಗೆರೆ ಅರೆಸ್ಟ್ ಆಗಿ ಪರಪ್ಪನ ಅಗ್ರಾಹಾರ ಜೈಲು ಸೇರಿದ್ದರು. 2019ರಲ್ಲಿ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ರು. ರವಿ ಬೆಳಗೆರೆ ಅವರ ಯುಟ್ಯೂಬ್ ಚಾನಲ್​ ಕೂಡ ಇದೆ. ಅದರಲ್ಲಿ ಹಾಕಿರುವ ಕೊನೇ ವಿಡಿಯೋ ಸ್ಯಾಂಡಲ್​ವುಡ್ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಇದಕ್ಕೂ ಹಿಂದಿನ ವಿಡಿಯೋದಲ್ಲಿ ಡೆಡ್ಲಿ ಸೋಮಾ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಅವರನ್ನ ಅವಿವೇಕಿ ಅಂತೆಲ್ಲಾ ಬೈದು ಬೆವರಿಳಿಸಿದ್ರು ರವಿ ಬೆಳಗೆರೆ.

-masthmagaa.com

Contact Us for Advertisement

Leave a Reply