ತುರ್ತುಪರಿಸ್ಥಿತಿಗೆ 45 ವರ್ಷ: ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು..?

masthmagaa.com:

ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ ಇಂದಿಗೆ ಸರಿಯಾಗಿ 45 ವರ್ಷ. ಜೂನ್​ 25, 1975ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೆ ತಂದಿದ್ದರು. 1977ರ ಮಾರ್ಚ್​ 21ರವರೆಗೆ ಅಂದ್ರೆ ಬರೋಬ್ಬರಿ 21 ತಿಂಗಳ ಕಾಲ ತುರ್ತುಪರಿಸ್ಥಿತಿ ಇತ್ತು. ಈ ಅವಧಿಯಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯಿಂದ ಹಿಡಿದು ಎಲ್ಲವನ್ನೂ ಇಂದಿರಾ ಗಾಂಧಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ರಾಜಕೀಯ ವಿರೋಧಿಗಳನ್ನೆಲ್ಲಾ ಜೈಲಿಗೆ ಕಳಿಸಲಾಯ್ತು.

ತುರ್ತುಪರಿಸ್ಥಿತಿ ಹೇರಿ 45 ವರ್ಷ ಪೂರ್ಣಗೊಂಡ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಟ್ವೀಟ್‌ ಮೂಲಕ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. 45 ವರ್ಷಗಳ ಹಿಂದೆ ಒಂದು ಕುಟುಂಬವು ಅಧಿಕಾರದ ದುರಾಸೆಯಿಂದ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿತು. ರಾತ್ರೋರಾತ್ರಿ ಇಡೀ ದೇಶವೇ ಜೈಲಾಗಿ ಪರಿವರ್ತನೆಯಾಯ್ತು. ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಲಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವನ್ನು ಕಿತ್ತುಕೊಳ್ಳಲಾಯ್ತು. ಬಡವರು ಮತ್ತು ದೀನ ದಲಿತರ ಮೇಲೆ ದೌರ್ಜನ್ಯ ನಡೆಸಲಾಯ್ತು ಅಂತ ಅಮಿತ್ ಶಾ ಹೇಳಿದ್ದಾರೆ.

ನಂತರ ಲಕ್ಷಾಂತರ ಜನರ ಹೋರಾಟದಿಂದ ತುರ್ತುಪರಿಸ್ಥಿತಿ ಕೊನೆಯಾಯ್ತು. ದೇಶದಲ್ಲಿ ಪುನಃ ಪ್ರಜಾಪ್ರಭುತ್ವವನ್ನ ಸ್ಥಾಪಿಸಲಾಯ್ತು. ಆದ್ರೆ ಕಾಂಗ್ರೆಸ್​ನಲ್ಲಿ ಸಾಧ್ಯವಾಗಲಿಲ್ಲ. ಒಂದು ಕುಟುಂಬದ ಹಿತಾಸಕ್ತಿಯೇ ಪಕ್ಷ ಮತ್ತು ದೇಶದ ಹಿತಾಸಕ್ತಿ ಆಗಿತ್ತು. ಅಂದಿನಿಂದಲೂ ಇಂದಿನವರೆಗೆ ಕಾಂಗ್ರೆಸ್​ನಲ್ಲಿ ಈ ಕುಟುಂಬ ರಾಜಕಾರಣ ಹಾಗೆಯೇ ಇದೆ ಅಂತ ಅಮಿತ್ ಶಾ ಕಿಡಿಕಾರಿದ್ದಾರೆ.

-masthmagaa.com

 

Contact Us for Advertisement

Leave a Reply