masthmagaa.com:

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ ಹರಿಯಾಣದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಗಿನಜಾವ 3.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ರು ಅಂತ ಅವರ ಪುತ್ರ ಫೈಸಲ್ ಪಟೇಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಅಹ್ಮದ್ ಪಟೇಲ್ 1949ರಲ್ಲಿ ಅಂದಿನ ಬಾಂಬೆ ರಾಜ್ಯದ ಭರುಚ್​ನಲ್ಲಿ ಜನಿಸಿದ್ರು. ಈಗ ಅದು ಗುಜರಾತ್​ನಲ್ಲಿದೆ. 1977ರಲ್ಲಿ ಭರುಚ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಅಹ್ಮದ್ ಪಟೇಲ್​ ಅವರನ್ನ ಇಂದಿರಾ ಗಾಂಧಿ ಆಯ್ಕೆ ಮಾಡಿದ್ರು. ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಹ್ಮದ್ ಪಟೇಲ್ 1980 ಮತ್ತು 1984ರ ಚುನಾವಣೆಯಲ್ಲೂ ಗೆದ್ದು ಹ್ಯಾಟ್ರಿಕ್ ಬಾರಿಸಿದ್ರು. ಹೀಗೆ 3 ಬಾರಿ ಲೋಕಸಭೆಗೆ ಆಯ್ಕೆಯಾದ ಅವರು​ 1993ರಿಂದ 2020ರವರೆಗೆ ಗುಜರಾತ್​ನಿಂದ ರಾಜ್ಯಸಭೆಗೆ ಆಯ್ಕೆಯಾದ್ರು. ಯುಪಿಎ ಸರ್ಕಾರದ ಅವಧಿಯಲ್ಲಿ ಟ್ರಬಲ್ ಶೂಟರ್​ ರೀತಿ ಇದ್ದರು. ಸರ್ಕಾರ ಮತ್ತು ಪಕ್ಷದ ನಡುವಿನ ಕೊಂಡಿಯಾಗಿ ಕೆಲಸ ಮಾಡಿದ್ರು. ತಮ್ಮ ರಾಜಕೀಯ ಜೀವನದಲ್ಲಿ ಅಹ್ಮದ್​ ಪಟೇಲ್ ಯಾವತ್ತೂ ಮಂತ್ರಿ ಪಟ್ಟ ಅಲಂಕರಿಸಿರಲಿಲ್ಲ. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅವರು ಎಐಸಿಸಿ ಖಜಾಂಚಿ ಕೂಡ ಆಗಿದ್ದರು. ಅಹ್ಮದ್ ಪಟೇಲ್ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

‘ತಮ್ಮ ಇಡೀ ಜೀವನವನ್ನ ಕಾಂಗ್ರೆಸ್​​ಗೆ ಸಮರ್ಪಿಸಿದ್ದ ಅಹ್ಮದ್ ಪಟೇಲ್​ರಂತಹ ಸಹೋದ್ಯೋಗಿಯನ್ನ ಕಳೆದುಕೊಂಡಿದ್ದೇನೆ. ಅವರ ಸ್ಥಾನವನ್ನು ರಿಪ್ಲೇಸ್ ಮಾಡಲಾಗದ ಒಡನಾಡಿ, ನಿಷ್ಠಾವಂತ ಸಹೋದ್ಯೋಗಿ ಮತ್ತು ಸ್ನೇಹಿತನನ್ನು ಕಳೆದುಕೊಂಡಿದ್ದೇನೆ’ ಅಂತ ಸೋನಿಯಾ ಗಾಂಧಿ ಹೇಳಿದ್ದಾರೆ.

‘ಇದು ದುಃಖದ ದಿನ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿದ್ದರು. ಕಾಂಗ್ರೆಸ್​ನನ್ನೇ ಉಸಿರಾಡುತ್ತಿದ್ರು, ಕಾಂಗ್ರೆಸ್​ಗಾಗಿ ಬದುಕಿದ್ದರು. ಅತ್ಯಂತ ಕಷ್ಟದ ಸಮಯದಲ್ಲಿ ಪಕ್ಷದ ಪರವಾಗಿ ನಿಂತರು. ಕಾಂಗ್ರೆಸ್​ನ ದೊಡ್ಡ ಆಸ್ತಿಯಾಗಿದ್ದರು. ನಾವು ಅವರನ್ನ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನನ್ನ ಸಂತಾಪ’ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.

‘ಅಹ್ಮದ್ ಪಟೇಲ್ ಅವರ ನಿಧನದಿಂದ ಬೇಸರವಾಗಿದೆ. ಅವರು ವರ್ಷಗಟ್ಟಲೆ ಸಾರ್ವಜನಿಕ ಜೀವನ ಮತ್ತು ಸಮಾಜ ಸೇವೆ ಮಾಡಿದ್ರು. ಕಾಂಗ್ರೆಸ್ ಪಕ್ಷವನ್ನ ಬಲಪಡಿಸುವಲ್ಲಿ ಅವರ ಪಾತ್ರ ಮರೆಯಲಾಗದು. ಅವರ ಪುತ್ರ ಫೈಸಲ್ ಜೊತೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ. ಅಹ್ಮದ್ ಪಟೇಲ್​ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply