masthmagaa.com:

ಲಡಾಖ್ ಗಡಿಯಲ್ಲಿ ಕಳೆದ 7 ತಿಂಗಳಿನಿಂದ ನಡೆಯುತ್ತಿರುವ ಸೇನಾ ಸಂಘರ್ಷವನ್ನ ಬಗೆಹರಿಸಿಕೊಳ್ಳಲು ಭಾರತ ಮತ್ತು ಚೀನಾ ಮುಂದಾಗಿವೆ. ಪ್ಯಾಂಗಾಂಗ್ ಸೋ-ಚುಶುಲ್ ಪ್ರದೇಶದಲ್ಲಿರುವ ‘ಫ್ರಿಕ್ಷನ್​ ಪಾಯಿಂಟ್​​’ಗಳಿಂದ ಯೋಧರು, ಟ್ಯಾಂಕ್, ಆರ್ಟಿಲರಿ ಗನ್ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನ ವಾಪಸ್​ ಕರೆಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಫ್ರಿಕ್ಷನ್ ಪಾಯಿಂಟ್ಸ್​ ಅಂದ್ರೆ ಸಂಘರ್ಷ ನಡೆಯುತ್ತಿದ್ದ ಜಾಗಗಳು ಅಂತ ಹೇಳಬಹುದು. ಇಂತಹ ಪ್ರದೇಶಗಳಲ್ಲಿ ಸೇನಾ ಸಂಘರ್ಷಕ್ಕೆ ಅಂತ್ಯಹಾಡಿ ಹಿಂದಕ್ಕೆ ಸರಿಯಲು ಉಭಯ ದೇಶಗಳು ಈಗ ಸಮ್ಮತಿ ಸೂಚಿಸಿವೆ.

ನವೆಂಬರ್ 6ರಂದು ಭಾರತ-ಚೀನಾ ನಡುವೆ ನಡೆದ 8ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಹಂತದ ಮಾತುಕತೆ ಬಳಿಕ ಈ ಎಲ್ಲಾ ಬೆಳವಣಿಗೆ ನಡೆಯುತ್ತಿದೆ. ಸೇನೆಯನ್ನು ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ವಾಪಸ್ ಕರೆಸಿಕೊಳ್ಳಬೇಕು ಅನ್ನೋ ಬಗ್ಗೆ ಎರಡೂ ದೇಶದ ಸೇನೆಗಳು ಡಿಸ್​ಎಂಗೇಜ್​ಮೆಂಟ್​ ಪ್ಲಾನ್ ರೆಡಿ ಮಾಡಿವೆ. ಈ ಪ್ಲಾನ್ ಪ್ರಕಾರ, ಪ್ಯಾಂಗಾಂಗ್ ಸೋ ಸರೋವರದ ಉತ್ತರ ತಟದಿಂದ ಸೇನಾ ಹಿಂಪಡೆಯುವಿಕೆ ಪ್ರಕ್ರಿಯೆ ಶುರುವಾಗಲಿದೆ.

ಅಂದ್ಹಾಗೆ ಪ್ಯಾಂಗಾಂಗ್ ಸೋ ಸರೋವರದ ಬಳಿ ಒಟ್ಟು 8 ಫಿಂಗರ್ ಏರಿಯಾಗಳಿವೆ. ಫಿಂಗರ್ ಏರಿಯಾ ಅಂದ್ರೆ ಸರೋವರದ ಪಕ್ಕದಲ್ಲಿರುವ ಪರ್ವ ಶ್ರೇಣಿಗಳು. 8 ಪರ್ವತಗಳನ್ನ 8 ಫಿಂಗರ್ ಏರಿಯಾ ಅಂತ ಕರೆಯಲಾಗುತ್ತೆ. ಈ 8 ಫಿಂಗರ್ ಏರಿಯಾಗಳ ಪೈಕಿ 1ರಿಂದ 4ನೇ ಫಿಂಗರ್ ಏರಿಯಾದವರೆಗೆ ಭಾರತ ಹಿಡಿತ ಹೊಂದಿದೆ, 4ರಿಂದ 8ನೇ ಫಿಂಗರ್ ಏರಿಯಾದವರೆಗೆ ಚೀನಾ ಹಿಡಿತ ಹೊಂದಿದೆ. ಆದ್ರೆ 8ನೇ ಫಿಂಗರ್ ಏರಿಯಾವರೆಗೂ ತನ್ನ ಜಾಗ, ಅಲ್ಲಿವರೆಗೆ ವಾಸ್ತವ ನಿಯಂತ್ರಣ ರೇಖೆ (LAC) ಇದೆ ಅಂತ ಭಾರತ ವಾದಿಸುತ್ತಿದೆ. ಆದ್ರೆ 4ನೇ ಫಿಂಗರ್ ಏರಿಯಾ ಬಳಿಯೇ LAC ಹಾದು ಹೋಗಿದೆ ಅನ್ನೋದು ಚೀನಾ ವಾದ. ಎರಡೂ ದೇಶಗಳು ಇದುವರೆಗೆ ಗಡಿಯನ್ನು ಗುರುತಿಸದೇ ಇರೋದ್ರಿಂದ ಈ ಗೊಂದಲ ದಶಕಗಳಿಂದ ಮುಂದುವರಿದುಕೊಂಡು ಬಂದಿದೆ.

ಇದೀಗ ಚೀನಾ ತನ್ನ ಸೇನೆಯನ್ನ 8ನೇ ಫಿಂಗರ್ ಏರಿಯಾದವರೆಗೂ ವಾಪಸ್ ಪಡೆದರೆ, ಭಾರತ ತನ್ನ ಸೇನೆಯನ್ನ ಫಿಂಗರ್-2 ಮತ್ತು ಫಿಂಗರ್-3 ಮಧ್ಯದಲ್ಲಿರುವ ಧನ್​ಸಿಂಗ್ ಥಾಪಾ ಪೋಸ್ಟ್​ವರೆಗೆ ಹಿಂಪಡೆಯಲಿದೆ. ಸೇನೆ ಹಿಂಪಡೆಯುವಿಕೆ ಕಾರ್ಯವು ಹಂತ ಹಂತವಾಗಿ ನಡೆಯಲಿದೆ. ಪ್ರತಿ ಹಂತದಲ್ಲೂ ಎದುರಾಳಿ ಸೇನೆಗಳು ಮೂರನೇ ಒಂದು ಭಾಗದಷ್ಟು ಹಿಂದಕ್ಕೆ ಸರಿಯುತ್ತವೆ ಅಂತ ಹೇಳಲಾಗ್ತಿದೆ. ಆದ್ರೆ ಚೀನಾವನ್ನು ಯಾವತ್ತೂ ನಂಬಕ್ಕಾಗಲ್ಲ ಅನ್ನೋದನ್ನ ಭಾರತ ಮರೆಯಬಾರದು, ಎಚ್ಚರಿಕೆ ಹೆಜ್ಜೆ ಇಡಬೇಕು.

ಜೂನ್​ 15-16ರಂದು ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಎರಡೂ ದೇಶಗಳ ಯೋಧರು ಕಲ್ಲು, ದೊಣ್ಣೆ, ರಾಡ್​ಗಳಿಂದ ಹೊಡೆದಾಡಿಕೊಂಡಿದ್ದರು. ಘಟನೆಯಲ್ಲಿ ಭಾರತೀಯ ಸೇನೆಯ 20 ಯೋಧರು ಹುತಾತ್ಮರಾದ್ರೆ, ಚೀನಾ ಮಾತ್ರ ತನ್ನ ಸೇನೆಯ ಎಷ್ಟು ಯೋಧರು ಮೃತಪಟ್ಟರು ಅಂತ ಇದುವರೆಗೆ ಬಹಿರಂಗಪಡಿಸಿಲ್ಲ. ಆದ್ರೆ ಎರಡೂ ಬದಿಯಲ್ಲಿ ಸಾವು-ನೋವು ಸಂಭವಿಸಿತ್ತು ಅಂತ ಭಾರತೀಯ ಸೇನೆ ಹೇಳಿದೆ.

-masthmagaa.com

Contact Us for Advertisement

Leave a Reply