masthmagaa.com:

ಕೊರೋನಾ ವೈರಸ್​ಗೆ ಆಕ್ಸ್​ಫರ್ಡ್ ಯುನಿವರ್ಸಿಟಿ ಮತ್ತು ಅಸ್ಟ್ರಝೆನೆಕಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆ ಸಾಕಷ್ಟು ಭರವಸೆ ಹುಟ್ಟಿಸಿರುವ ನಡುವೆ ಮತ್ತೊಂದು ಲಸಿಕೆಯ 3ನೇ ಹಂತದ ಮಾನವ ಪ್ರಯೋಗ ಸದ್ದಿಲ್ಲದೆ ಆರಂಭವಾಗಿದೆ. ಚೀನಾ ಮೂಲದ ಖಾಸಗಿ ಸಂಸ್ಥೆ ಸಿನೊವ್ಯಾಕ್ ತಾನು ಅಭಿವೃದ್ಧಿಪಡಿಸಿರುವ ‘ಕೊರೋನಾವ್ಯಾಕ್​’ ಲಸಿಕೆಯ 3ನೇ ಮತ್ತು ಕೊನೆಯ ಹಂತದ ಪ್ರಯೋಗವನ್ನು ಬ್ರೆಜಿಲ್​ನಲ್ಲಿ ಆರಂಭಿಸಿದೆ.

ಕೊರೋನಾ ಹಾವಳಿಗೆ ತತ್ತರಿಸಿರುವ ಬ್ರೆಜಿಲ್​ನಲ್ಲಿ ಸುಮಾರು 900 ಸ್ವಯಂಸೇವಕರಿಗೆ ಈ ಲಸಿಕೆಯ ಮೊದಲ ಡೋಸ್​ ಅನ್ನು ನೀಡಲಾಗಿದೆ. ಸೋಂಕು ಹೆಚ್ಚಿರುವ 6 ರಾಜ್ಯಗಳ ಸ್ವಯಂಸೇವಕರು ಈ ಪ್ರಯೋಗದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯೇ ಇದ್ದಾರೆ. ಈ ಪ್ರಯೋಗದ ಆರಂಭಿಕ ಫಲಿತಾಂಶವು 90 ದಿನಗಳ ಒಳಗೆ ಬರಲಿದೆ ಅಂತ ಸರ್ಕಾರ ಹೇಳಿದೆ.

ಅಂದ್ಹಾಗೆ ಇಡೀ ಜಗತ್ತಿನಲ್ಲಿ ಮೂರು ಲಸಿಕೆಗಳು ಮಾತ್ರ ಕೊನೆಯ ಹಂತದ ಮಾನವ ಪ್ರಯೋಗ ನಡೆಸುತ್ತಿವೆ. ಮೊದಲನೇದು, ಆಕ್ಸ್​ಫರ್ಡ್​ ಯುನಿವರ್ಸಿಟಿ-ಅಸ್ಟ್ರಝೆನೆಕಾ ಅಭಿವೃದ್ಧಿಪಡಿಸಿರುವ ‘AZD1222’ ಲಸಿಕೆ. ಎರಡನೇದು, ಚೀನಾದ ಸಿನೋಫಾರ್ಮ್ ಸಿಎನ್​ಬಿಜಿ​ ಅಭಿವೃದ್ಧಿಪಡಿಸಿರುವ ಲಸಿಕೆ. ಮೂರನೇದು, ಚೀನಾದ ಸಿನೊವ್ಯಾಕ್ ಬಯೋಟೆಕ್ ಅಭಿವೃದ್ಧಿಪಡಿಸಿರುವ  ‘ಕೊರೋನಾವ್ಯಾಕ್​’ ಲಸಿಕೆ.

ಆಕ್ಸ್​ಫರ್ಡ್​ ಯುನಿವರ್ಸಿಟಿ-ಅಸ್ಟ್ರಝೆನೆಕಾ ಅಭಿವೃದ್ಧಿಪಡಿಸಿರುವ ‘AZD1222’ ಲಸಿಕೆಯ 3ನೇ ಹಂತದ ಮಾನವ ಪ್ರಯೋಗ ವಿವಿಧ ದೇಶಗಳಲ್ಲಿ ನಡೀತಾ ಇದೆ. ಭಾರತದಲ್ಲೂ ಇದರ ಮಾನವ ಪ್ರಯೋಗ ಆರಂಭಿಸಲು ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಸಿದ್ಧತೆ ಮಾಡಿಕೊಂಡಿದೆ. ಇನ್ನು ಸಿನೋಫಾರ್ಮ್ ಸಿಎನ್​ಬಿಜಿ​ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗ ಇತ್ತೀಚೆಗಷ್ಟೇ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆರಂಭವಾಗಿತ್ತು. ಇದೀಗ ಚೀನಾದ ಸಿನೊವ್ಯಾಕ್ ಬಯೋಟೆಕ್ ಅಭಿವೃದ್ಧಿಪಡಿಸಿರುವ  ‘ಕೊರೋನಾವ್ಯಾಕ್​’ ಲಸಿಕೆಯ ಪ್ರಯೋಗ ಬ್ರೆಜಿಲ್​ನಲ್ಲಿ ಆರಂಭವಾಗಿದೆ.

-masthmagaa.com

Contact Us for Advertisement

Leave a Reply