masthmagaa.com:

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಯನ್ನು ಅರೆಸ್ಟ್ ಮಾಡಿದ್ದಾರೆ. ಇವತ್ತು ಬೆಳಗ್ಗೆ 6.30ರ ಸುಮಾರಿಗೆ ಬೆಂಗಳೂರಿನ ಯಲಹಂಕದಲ್ಲಿರುವ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ಮೊದಲು ದಾಳಿ ನಡೆಸಿದ್ದರು.

ಮನೆಯಲ್ಲಿ ನಾಲ್ಕೈದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತರಲಾಗಿತ್ತು. ಚಾಮರಾಜಪೇಟೆಯ ಕಚೇರಿಯಲ್ಲಿ ಇನ್ಸ್​ಪೆಕ್ಟರ್​ ಅಂಜುಮಾಲಾ ನಾಯಕ್​, ಡಿಸಿಪಿ ರವಿಕುಮಾರ್ ಮತ್ತು ಎಸಿಪಿ ಗೌತಮ್ ವಿಚಾರಣೆಗೆ ಒಳಪಡಿಸಿದ್ದರು. ಬೆಳಗ್ಗೆ 11.30ರಿಂದ ಸಂಜೆ 6.30ರವರೆಗೆ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಇದೀಗ ರಾಗಿಣಿ ದ್ವಿವೇದಿಯನ್ನು ಅರೆಸ್ಟ್ ಮಾಡಿದ್ದಾರೆ.

ಅಂದ್ಹಾಗೆ ಡ್ರಗ್​​ ಮಾಫಿಯಾಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೆಪ್ಟೆಂಬರ್ 2ರಂದು ರಾಗಿಣಿಗೆ ನೋಟಿಸ್​ ನೀಡಿದ್ದರು. ಆದ್ರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬದಲಾಗಿ ತಮ್ಮ ವಕೀಲರನ್ನು ಕಳಿಸಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದರು. ಜೊತೆಗೆ ಸೆಪ್ಟೆಂಬರ್ 7ರಂದು ವಿಚಾರಣೆಗೆ ಹಾಜರಾಗುತ್ತೇನೆ ಅಂತ ಟ್ವೀಟ್ ಮಾಡಿ ತಿಳಿಸಿದ್ದರು.

ಇನ್ನು ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಸಾರಿಗೆ ಇಲಾಖೆ ನೌಕರ ರವಿಶಂಕರ್​ ಮತ್ತು ನಟಿ ರಾಗಿಣಿ ದ್ವಿವೇದಿ ನಡುವೆ ನಿಕಟ ಸಂಪರ್ಕ ಇದೆ ಅನ್ನೋ ವಿಚಾರ ಕೂಡ ಬೆಳಕಿಗೆ ಬಂದಿದೆ. ಅಲ್ಲದೆ ನಟಿ ಸಂಜನಾ ಗಲ್ರಾನಿ ಅವರ ಸ್ನೇಹಿತ ರಾಹುಲ್ ಎಂಬುವನನ್ನು ಕೂಡ ಶುಕ್ರವಾರ ಅರೆಸ್ಟ್ ಮಾಡಲಾಗಿದೆ. ಮತ್ತೊಂದುಕಡೆ ಶರ್ಮಿಳಾ ಮಾಂಡ್ರೆ ಸ್ನೇಹಿತ ಕಾರ್ತಿಕ್​ ಈಗಾಗಲೇ ವಿಚಾರಣೆಗೆ ಒಳಪಟ್ಟಿದ್ದಾರೆ.

ಪಬ್ ಹೋಟೆಲ್​ಗಳಲ್ಲಿ ಪಾರ್ಟಿ ಆಯೋಜನೆ ಮಾಡುವಲ್ಲಿ ರವಿಶಂಕರ್, ರಾಹುಲ್ ಮತ್ತು ಕಾರ್ತಿಕ್​ ಪಾತ್ರವಹಿಸಿದ್ದರು. ಈ ಪಾರ್ಟಿಗಳಿಗೆ ಡ್ರಗ್ಸ್​ ಪೂರೈಕೆಯಾಗ್ತಿತ್ತು ಅನ್ನೋ ವಿಚಾರ ಕೂಡ ಸಿಸಿಬಿ ವಿಚಾರಣೆ ವೇಳೆ ಬಹಿರಂಗವಾಗಿದೆ. ಹೀಗಾಗಿ ಸಂಜನಾ ಗಲ್ರಾನಿ ಮತ್ತು ಶರ್ಮಿಳಾ ಮಾಂಡ್ರೆಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply