ಭಾರತದ ರೈತರು ಹೀಗಿರೋದು ಯಾಕೆ ಗೊತ್ತಾ..?

masthmagaa.com:

ಫ್ರೆಂಡ್ಸ್, ರೈತ ದೇಶದ ಬೆನ್ನೆಲುಬು.. ಜೈ ಜವಾನ್ ಜೈ ಕಿಸಾನ್.. ಇದು ನಮ್ಮ ದೇಶದಲ್ಲಿ ರೈತರ ಮಹತ್ವವನ್ನು ತಿಳಿಸೋ ಎರಡು ವಾಕ್ಯಗಳು.. ಯಾಕಂದ್ರೆ ನಮ್ಮ ದೇಶದಲ್ಲಿ ರೈತರ ಮಹತ್ವ ಅಷ್ಟಿದೆ.. ದೇಶದ ಜಿಡಿಪಿ ಪೈಕಿ ಶೇ.17ರಷ್ಟು ಕೊಡುಗೆ ಕೃಷಿ ನೀಡುತ್ತೆ.. 1970ರ ವೇಳೆಗೆ ಈ ಪ್ರಮಾಣ ಶೇ.45ರಷ್ಟಿತ್ತು. ಆದ್ರೆ ನಂತರದಲ್ಲಿ ಕಡಿಮೆಯಾಗಿ ಆಗಿ ಶೇ.17ಕ್ಕೆ ಬಂತು ನಿಂತಿದೆ. ಮನುಷ್ಯ ಬದುಕೋದಕ್ಕೆ ಸಿಗರೇಟ್ ಅನಿವಾರ್ಯವಲ್ಲ.. ಆದ್ರೂ ಸಿಗರೇಟ್ ಕಂಪನಿ ಮಾಲೀಕರು ಶ್ರೀಮಂತರು.. ಎಣ್ಣೆ ಇಲ್ದಿದ್ರೂ ಮನುಷ್ಯರ ಜೀವ ಏನೂ ಹೋಗಲ್ಲ.. ಆದ್ರೂ ಕೂಡ ಎಣ್ಣೆ ಕಂಪನಿ ಮಾಲೀಕರು ಶ್ರೀಮಂತರಾಗಿದ್ದಾರೆ.. ಬ್ರಾಂಡೆಡ್ ಬ್ರಾಂಡೆಡ್ ವೆಹಿಕಲ್ ಇಲ್ಲದಿದ್ರು ಮನುಷ್ಯರು ಬದುಕ್ತಾರೆ.. ಆದ್ರೂ ಕೂಡ ಈ ವಾಹನಗಳ ಮಾಲೀಕರು ಶ್ರೀಮಂತರಾಗಿದ್ದಾರೆ. ಆದ್ರೆ ದಿನನಿತ್ಯವೂ ಅಗತ್ಯವಾದ ಆಹಾರ ನೀಡುವ ರೈತರು ಮಾತ್ರ ಬಡವರಾಗೇ ಉಳಿದಿದ್ದಾರೆ. ಸಮಾಜದಲ್ಲಿ ಜನ ಅಪರೂಪಕ್ಕೆ ಅನಾರೋಗ್ಯಕ್ಕೆ ಒಳಗಾದ್ರೂ ವೈದ್ಯರಿಗೆ ಗೌರವಿಸ್ತಾರೆ.. ಅಪರೂಪಕ್ಕೆ ಇಂಜಿನಿಯರ್, ಲಾಯ ಸಹಾಯ ಬೇಕಿರೋದಾದ್ರೂ ಅವರಿಗೆ ಗೌರವ ಸಿಗುತ್ತೆ. ಎಲೆಕ್ಷನ್ ಟೈಮಲ್ಲಿ ಮಾತ್ರ ಹಲ್ಲು ಕಿರಿದುಕೊಂಡು ಬರುವ ರಾಜಕಾರಣಿಗಳಿಗೂ ಅದೇನ್ ಗೌರವ.. ಅದೇನ್ ಸನ್ಮಾನ.. ಆದ್ರೆ ಪ್ರತಿದಿನವೂ ರೈತ ಬೆಳೆದ ಅನ್ನ ತಿನ್ನೋ ಜನ ರೈತರಿಗೆ ಗೌರವಿಸೋದಿಲ್ಲ.. ಎಲ್ಲರೂ ಅಲ್ಲ ಕೆಲವರು..

ಭಾರತದಲ್ಲಿ ಉತ್ಪಾದಕತೆಯೂ ಕಡಿಮೆ ಇದೆ.. ಉತ್ಪಾದಕತೆ ಅಂದ್ರೆ ರೈತ ಬೆಳೆಯೋ ಬೆಳೆಯ ಪ್ರಮಾಣ.. ನೋಡಿ ಈಗ ಭಾರತದಲ್ಲಿ ಪ್ರತಿ ಹೆಕ್ಟೇರ್​​​​ಗೆ 3,500 ಕೆ.ಜಿ ಭತ್ತ ಬೆಳೀತಾರೆ. ಅದೇ ಚೀನಾದಲ್ಲಿ ಪ್ರತಿ ಹೆಕ್ಟೇರ್​​​​ಗೆ 7 ಸಾವಿರ ಕೆ.ಜಿ, ಬಾಂಗ್ಲಾದೇಶದಲ್ಲಿ 4.5 ಸಾವಿರ ಕೆ.ಜಿ, ಆಸ್ಟ್ರೇಲಿಯಾದಲ್ಲಿ 10 ಸಾವಿರ ಕೆ.ಜಿ, ಅಮೆರಿಕದಲ್ಲಿ 8,500 ಕೆ.ಜಿ ಬೆಳೀತಾರೆ. ಅದೇ ಗೋದಿ ವಿಚಾರಕ್ಕೆ ಬಂದ್ರೆ ಭಾರತದಲ್ಲಿ ಪ್ರತಿ ಹೆಕ್ಟೇರ್​​​ಗೆ 3,000 ಕೆ.ಜಿಯಷ್ಟು ಗೋದಿ ಬೆಳೆಯಲಾಗುತ್ತೆ. ಅದೇ ಚೀನಾದಲ್ಲಿ 5 ಸಾವಿರ ಕೆ.ಜಿ, ಯೂರೋಪ್‍ನಲ್ಲಿ 6 ಸಾವಿರ ಕೆ.ಜಿ ಮತ್ತು ನ್ಯೂಜಿಲೆಂಡ್‍ನಲ್ಲಿ 8 ಸಾವಿರ ಕೆ.ಜಿ ಗೋಧಿ ಬೆಳೆಯಲಾಗುತ್ತೆ. ಅಂದ್ರೆ ಭಾರತದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ಫಸಲು ಬರ್ತಾ ಇದೆ ಅಂತ ಆಯ್ತು. ಬರೀ ಭತ್ತ, ಗೋದಿ ಅಂತ ಅಲ್ಲ.. ಬೇರೆ ಬೆಳೆಗಳ ಉತ್ಪಾದನೆಯಲ್ಲೂ ಭಾರತ ಹಿಂದೆ ಇದೆ.

ಭಾರತದ ರೈತರು ಬಡತನದಲ್ಲೇ ಬದುಕ್ತಿದ್ದಾರೆ.. ಎಲ್ಲರೂ ಅಂತ ಹೇಳಕ್ಕಾಗಲ್ಲ.. ಹೆಚ್ಚಿನವರು.. ಅಂದ್ರೆ ಸಣ್ಣ ರೈತರು.. ಅವರು ಬಡವರಾಗಿ ಉಳಿದುಕೊಳ್ಳಲು ಹಲವಾರು ಕಾರಣಗಳಿವೆ… ಅವುಗಳನ್ನು ಒಂದೊಂದಾಗೇ ನೋಡೋಣ..

ಭೂಮಿಯ ಅಸಮರ್ಪಕ ಹಂಚಿಕೆ
ನಮ್ಮ ದೇಶದಲ್ಲಿ ಇರೋ ರೈತರೆಲ್ಲರ ನಡುವೆ ಸಮಾನವಾಗಿ ಭೂಮಿ ಹಂಚಿಕೆಯಾಗಿಲ್ಲ.. ಅದೆಷ್ಟೋ ಮಂದಿ ಭೂರಹಿತ ರೈತರು ಇದ್ದಾರೆ. ಗೇಣಿ ಆಧಾರದಲ್ಲಿ ಭೂಮಿಯನ್ನು ಪಡೆದು ಕಷ್ಟಪಟ್ಟು ಬೆಳೆದು, ಅದರ ಒಂದು ಭಾಗವನ್ನು ಭೂ ಮಾಲೀಕರಿಗೆ ನೀಡುವ ಪದ್ಧತಿ ಇನ್ನೂ ಹಲವೆಡೆ ಅಸ್ತಿತ್ವದಲ್ಲಿದೆ. ರೈತರು ಕಷ್ಟ ಪಟ್ಟು ಬೆಳೆಯುತ್ತಾರೆ. ಆದ್ರೆ ರೈತ ಅನ್ನೋ ಹಣೆಪಟ್ಟಿ ಹೊತ್ತ ಭೂ ಮಾಲೀಕ ಗದ್ದೆಗೆ ಕಾಲೇ ಇಡದೇ ಅದರ ಫಲವನ್ನು ಪಡೆಯುತ್ತಾನೆ.. ಇತ್ತ ರೈತರು ಕಷ್ಟಪಟ್ಟು ಬೆಳೆದು, ಅದರಲ್ಲಿ ಒಂದು ಭಾಗವನ್ನು ಭೂ ಮಾಲೀಕನಿಗೆ ಕೊಟ್ಟು, ಉಳಿದಿದ್ದರಲ್ಲಿ ಜೀವನ ನಡೆಸ್ತಾರೆ.

ದುಶ್ಚಟಗಳು
ಇದು ಬರೀ ರೈತ್ರು ಮಾತ್ರವಲ್ಲ.. ಎಲ್ಲರಿಗೂ ಅನ್ವಯಿಸುತ್ತೆ.. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ದುಶ್ಚಟ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತೆ.. ಕುಡಿತ, ಸಿಗರೇಟು ಇಂಥಹ ದುಶ್ಚಟಗಳು ಹಳ್ಳಿಗಳಲ್ಲಿ ಕಾಮನ್ ಆಗಿರುತ್ತೆ. ಇದು ಕೂಡ ರೈತರು ಹಿಂದುಳಿಯಲು ಕಾರಣವಾಗಿರಬಹುದು..

ಉತ್ಪಾದನಾ ವೆಚ್ಚ, ಸಾಲದ ಶೂಲ
ರೈತರು ಒಂದು ಬೆಳೆ ಬೆಳೆಯಬೇಕಾದ್ರೆ ಅದಕ್ಕೆ ಅಷ್ಟೇ ಖರ್ಚು ಕೂಡ ಮಾಡಬೇಕಾಗುತ್ತೆ. ಗೊಬ್ಬರ, ಕ್ರಿಮಿನಾಶಕ ಅದು ಇದು ಅಂತ ಹಣ ಖರ್ಚಾಗುತ್ತೆ. ಗೊಬ್ಬರ ಹಾಕದಿದ್ರೆ ಬೆಳೆ ಚೆನ್ನಾಗಿ ಬರಲ್ಲ.. ಕ್ರಿಮಿನಾಶಕ ಹಾಕದೇ ಇದ್ರೆ ಬೆಳೆ ಉಳಿಯಲ್ಲ.. ಹೀಗಾಗಿ ರೈತರು ಸಾಲ, ಶೂಲ ಮಾಡಿಯಾದ್ರೂ ಗೊಬ್ಬರ ಹಾಕಿ, ಕ್ರಿಮಿನಾಶಕ ಬಳಸಿ ಬೆಳೆ ಬೆಳೆಯುತ್ತಾರೆ. ಇದಕ್ಕೆಲ್ಲಾ ದುಡ್ಡು ಬೇಕಲ್ವಾ.. ಅದಕ್ಕೆ ಸಾಲ ಮಾಡ್ತಾರೆ.. ಆದ್ರೆ ಕೊನೆಯಲ್ಲಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗೋದೇ ಇಲ್ಲ.. ಸಾಲ ಕಟ್ಟೋಕೆ ಆಗೋದಿಲ್ಲ. ಹೀಗಾಗಿ ರೈತರು ಸಾಲದ ಶೂಲದಲ್ಲಿ ಸಿಲುಕುತ್ತಾ ಹೋಗ್ತಾರೆ.. ಅದೆಷ್ಟೋ ರೈತರು ಸಾಲಬಾಧೆಗೆ ನೊಂದು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಬರೀ ಇದೊಂದೇ ಅಂತ ಅಲ್ಲ.. ಬೇರೆ ಬೇರೆ ಕಾರಣಗಳಿಂದ 1995ರಿಂದ ಈವರೆಗೆ ಹತ್ತತ್ರ 3 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವಿದ್ಯಾವಂತರು
ರೈತರು ಹೆಚ್ಚಾಗಿ ಅವಿದ್ಯಾವಂತರಾಗಿರ್ತಾರೆ.. ಅವಿದ್ಯಾವಂತರು ಅಂದ್ರೆ ಲೋಕಜ್ಞಾನ ಇರಲ್ಲ ಅಂತ ಅಲ್ಲ.. ಲೋಕಜ್ಞಾನ ನಮಗೆಲ್ಲರಿಗಿಂತಲೂ ಜಾಸ್ತಿಯೇ ಇರುತ್ತೆ. ಆದ್ರೆ ಟೆಕ್ನಿಕಲಿ ಕೆಲವೊಂದು ವಿಷಯಗಳು ಅವರಿಗೆ ಗೊತ್ತಾಗಲ್ಲ.. ಅಂದ್ರೆ ಮಾರುಕಟ್ಟೆಯಲ್ಲಿ ಯಾವ ಉತ್ಪನ್ನಕ್ಕೆ ಬೇಡಿಕೆ ಇದೆ. ನಾನು ಯಾವ ಬೆಳೆ ಬೆಳೆದ್ರೆ ಲಾಭವಾಗುತ್ತೆ.. ಯಾವ ಉತ್ಪನ್ನದ ಪೂರೈಕೆ ಹೇಗಿದೆ ಅನ್ನೋದು ಗೊತ್ತಾಗಲ್ಲ.. ಅಷ್ಟೇ ಅಲ್ಲ.. ಬೆಳೆಯೋಕು ಮುನ್ನ ವಾತಾವರಣ ಹೇಗಿದೆ.. ಯಾವ ವಾತಾವರಣದಲ್ಲಿ ಯಾವ ಬೆಳೆ ಬೆಳೆದ್ರೆ ಒಳ್ಳೆಯದು ಅನ್ನೋದನ್ನ ನಿರ್ಧರಿಸೋದು ಕಷ್ಟವಾಗುತ್ತೆ. ಬೆಳೆ ಬೆಳೆದ ಬಳಿಕ ದರ ನಿಗದಿ ವಿಚಾರದಲ್ಲೂ ರೈತರಿಗೆ ಕಷ್ಟವಾಗುತ್ತೆ.. ಯಾಕಂದ್ರೆ ದರ ನಿರ್ಧಾರ ಮಾಡೋಕೆ ರೈತರಿಗೆ ಅಷ್ಟೊಂದು ಅನುಭವ ಇರೋದಿಲ್ಲ.

ಉತ್ತಮ ಬಿತ್ತನೆ ಬೀಜದ ಕೊರತೆ
ಸಾಮಾನ್ಯವಾಗಿ ಎಲ್ಲಾ ರೈತರಿಗೂ ಎದುರಾಗೋ ಒಂದು ದೊಡ್ಡ ಸಮಸ್ಯೆ ಇದು ಅಂತಲೇ ಹೇಳಬಹುದು.. ರೈತರು ಬೆಳೆದ ಬೆಳೆಯ ಇಳುವರಿ ಬಿತ್ತನೆ ಬೀಜವನ್ನೇ ಆಧರಿಸಿರುತ್ತೆ. ಆದ್ರೆ ಈಗ ನಾವು ಬಡವರು ಅಂತ ಏನ್ ಕರೀತಾ ಇದೀವಲ್ವಾ.. ಈ ಸಣ್ಣ ಸಣ್ಣ ರೈತರಿಗೆ ಉತ್ತಮ ಬಿತ್ತನೆ ಬೀಜ ಸಿಗೋದಿಲ್ಲ.. ಸಿಗೋದಿಲ್ಲ ಅನ್ನೋದಕ್ಕಿಂತ ಅದರ ದರ ಜಾಸ್ತಿ ಇರುತ್ತೆ. ಹೀಗಾಗಿ ರೈತರು ಕಡಿಮೆ ದರದ ಬಿತ್ತನೆ ಬೀಜ ತಂದು ಬಿತ್ತುತ್ತಾರೆ. ಅದ್ರಿಂದ ಬರುವ ಇಳುವರಿ ಕೂಡ ಕಡಿಮೆ ಇರುತ್ತೆ.

ಮಧ್ಯವರ್ತಿಗಳ ಹಾವಳಿ
ಇಷ್ಟೆಲ್ಲಾ ಕಷ್ಟಪಟ್ಟು ಬೆಳೆ ಬೆಳೆದು ಮಾರುಕಟ್ಟೆಗೆ ತಂದ್ರೆ ಅಲ್ಲಾದ್ರು ನ್ಯಾಯವಾದ ಬೆಲೆ ಸಿಗುತ್ತಾ..? ಅದೂ ಇಲ್ಲ.. ದಲ್ಲಾಳಿಗಳ ಹಾವಳಿ ಜಾಸ್ತಿ ಇರುತ್ತೆ. ರೈತರಿಂದ ಕಡಿಮೆ ಬೆಲೆಗೆ ಕೊಳ್ಳುವ ದಲ್ಲಾಳಿಗಳು ಚೆನ್ನಾಗಿ ದುಡ್ಡು ಮಾಡ್ಕೊಳ್ತಾರೆ. ಆದ್ರೆ ಕಷ್ಟ ಪಟ್ಟು ಬೆಳೆದ ರೈತರಿಗೆ ಮಾತ್ರ ಏನೂ ಸಿಗಲ್ಲ.. ಮಾರುಕಟ್ಟೆಯಲ್ಲಿ ನಾವೆಲ್ಲಾ ದುಡ್ಡು ಕೊಟ್ಟು ತಗೋತೀವಲ್ವಾ ಅದರ ಅರ್ಧದಷ್ಟು ದುಡ್ಡು ಕೂಡ ರೈತನ ಜೇಬಿಗೆ ಹೋಗೋದಿಲ್ಲ.. ಇಷ್ಟು ಸಾಲದು ಅಂತ ರೈತರ ತುಂಡು ಭೂಮಿಯ ಮೇಲೂ ರಿಯಲ್ ಎಸ್ಟೇಟ್ ಕುಳಗಳ ಕಣ್ಣು ಬಿದ್ದಿದ್ದು, ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ..

ಸರ್ಕಾರದ ಯೋಜನೆಗಳ ವಿಫಲತೆ
ಸರ್ಕಾರ ರೈತರಿಗಾಗಿ ವಿವಿಧ ಬಗೆಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತೆ. ಅದ್ರೆ ಅದು ರೈತರವರೆಗೆ ಬರೋದಿಲ್ಲ ಅಷ್ಟೆ.. ಬಂದ್ರೂ ಅದನ್ನು ಪಡೆದುಕೊಳ್ಳುವ ಜ್ಞಾನ ಕೂಡ ರೈತರಲ್ಲಿ ಇರೋದಿಲ್ಲ.. ಜ್ಞಾನ ಇರೋದಿಲ್ಲ ಅನ್ನೋದಕ್ಕಿಂತ ಸಮಯ ಇರಲ್ಲ ಅಂತಾನೇ ಹೇಳ್ಬೋದು.. ಯಾಕಂದ್ರೆ ಪ್ರತಿದಿನವೂ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ ರೈತರು.. ಈ ನಡುವೆ ಸರ್ಕಾರ ಯಾವ ಯೋಜನೆ ಜಾರಿಗೆ ತಂದಿದೆ, ಅದಕ್ಕೆ ಅಪ್ಲೈ ಮಾಡೋದು ಹೇಗೆ..? ಯಾರ ಬಳಿ ಮಾಹಿತಿ ಪಡೆಯಬೇಕು ಅನ್ನೋದು ಅವರಿಗೆ ಗೊತ್ತಿರೋದಿಲ್ಲ.. ಹೀಗಾಗಿ ಸರ್ಕಾರದ ಯೋಜನೆಗಳು ರೈತರ ತನಕ ಬರೋದೇ ಇಲ್ಲ.

ಸರ್ಕಾರ ಏನ್ಮಾಡ್ಬೇಕು..?
ಸರ್ಕಾರ ಒಂದಾದ್ಮೇಲೆ ಒಂದು ಯೋಜನೆಗಳನ್ನು ಜಾರಿಗೆ ತರುತ್ತೆ. ಆದ್ರೆ ಅದು ರೈತರವರೆಗೆ ತಲುಪಿದ್ಯಾ ಅನ್ನೋದನ್ನ ನೋಡಬೇಕು.. ಈ ರಾಜಕೀಯ ಪಕ್ಷಗಳು ನಿರಂತರವಾಗಿ ಮನೆ ಮನೆಗೆ ಹೋಗಿ ಮತಬಿಕ್ಷೆ ಬೇಡುತ್ತವೆ.. ಈ ಸಲ ಮರಿಬೇಡಿ.. ನಮ್ದು ಈ ಗುರುತು.. ಹಂಗೆ ಹಿಂಗೆ ಅಂತ.. ಅದೇ ರೀತಿ ರೈತರಿಗೆ ಸರ್ಕಾರ ಜಾರಿಗೆ ತಂದ ಯೋಜನೆಗಳ ಬಗ್ಗೆ, ಮಾರುಕಟ್ಟೆಯ ಪರಿಸ್ಥಿತಿಯ ಬಗ್ಗೆ, ಹವಾಮಾನದ ಬಗ್ಗೆ ಮಾಹಿತಿ ಕೊಡುವ ಕೆಲಸ ಮಾಡಿದ್ರೆ ರೈತರಿಗೂ ಒಳ್ಳೆಯದಾಗುತ್ತೆ. ಇಂತಹ ಕೆಲಸ ಮಾಡಿದ ಪಕ್ಷಗಳಿಗೆ ಓಟು ಬೀಳುತ್ತೆ.. ಬಿಕ್ಷೆ ಬೇಡೋ ಅಗತ್ಯವೇ ಇರಲ್ಲ.. ಜೊತೆಗೆ ರೈತರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಪರಿಹಾರ ಘೋಷಿಸುವ ಬದಲು ಬದುಕಿರುವಾಗಲೇ ಅವರ ಸಮಸ್ಯೆ ಬಗೆಹರಿಸೋಕೆ ಯತ್ನಿಸಬೇಕು..

-masthmagaa.com

Contact Us for Advertisement

Leave a Reply